Saturday, June 17, 2017

ಗಿರಿ-ಶಿಖರಗಳು ಬೆಳೆಯುತ್ತವೆಯೇ?

ನಮಸ್ಕಾರ,

ಬಹುದಿನಗಳ ನಂತರ ಬರೆಯುವ ಮನಸ್ಸಾಗಿದೆ!

~~ಅಂಗೈಯ ಆಕಾಶದಿಂದ ನಕ್ಷತ್ರವೊಂದು ಜಾರಿ ನೇರ ಬೆಟ್ಟದ ತುದಿಯ ಮೇಲೇ ಬಿದ್ದಿದೆ.

ಕೈಗೆಟುಕದ ನಕ್ಷತ್ರವು ಗಿರಿಯ ಮೇಲೆ ಕಾಲಿರಿಸಿದರು ಮತ್ತೆ ಮೆಲ್ಲನೆ ದೂರ ಸರಿಯುವಂತೆ ಕಂಡಿದೆ.~~

ನೇಪಾಳದ ಸಾಗರಮಾತಾ ರಾಷ್ಟ್ರೀಯ ಉದ್ಯಾನವನ - ಚಿತ್ರ ಕೃಪೆ: The World at Night

ಅರೆರೆ! ವಿಜ್ಞಾನದ ಲೇಖನ ಬರೆಯುತ್ತೀನೆಂದು ಹೇಳಿ ಇದೇನು ಕವಿತೆ ಬರೆಯಲು ಶುರುಮಾಡಿದೆನೆಂದುಕೊಂಡಿರೆ??

ಇಲ್ಲ ಮೇಲಿನ ಕವನ ಇಂದಿನ ಸ್ವಾರಸ್ಯಕರ ವಿಷಯಕ್ಕೆ ಸಂಬಂಧಿಸಿದ್ದೇ! ಸರಿ ಇನ್ನು ವಿಚಾರಕ್ಕೆ ಬರೋಣ, ಪ್ರಶ್ನೆ “ಗಿರಿ-ಶಿಖರಗಳು ಬೆಳೆಯುತ್ತವೆಯೇ?”.

ಅಲ್ಲ ಸ್ವಾಮಿ! ಕಳೆದ ವರ್ಷ ನಾನು ನೆಟ್ಟ ಸಸಿ ಕೂಡ ಎಷ್ಟೇ ಪಾಲನೆ ಪೋಷಣೆ ಮಾಡಿದರೂ ಸರಿಯಾಗಿ ಎರಡು ಅಡಿ ಬೆಳೆದಿಲ್ಲ! ಇನ್ನು ಬೆಟ್ಟ-ಗುಡ್ಡ ಬೆಳಿತಾವಾ? ಹೊಗೋಗ್ ಸ್ವಾಮಿ ನಿಮ್ಗೆ ಮಾಡಕ್ ಬೇರೆ ಕೆಲ್ಸ ಇಲ್ಲ ಅಂತ ಮಾತ್ರ ಹೇಳ್ಬೇಡಿ.
ಎಲ್ಲ ಬೆಟ್ಟ-ಗುಡ್ಡಗಳು ಬೆಳೆಯದಿದ್ದರೂ ಭೂಮಿ ಮೇಲಿನ ಕೆಲವೊಂದು ಪರ್ವತ ಶ್ರೇಣಿಗಳು ಬೆಳೆಯುತ್ತಿವೆ, ಅದಕ್ಕೆ ಜೀವಂತ ಉದಾಹರಣೆಯೇ ನಮ್ಮ ಹಿಮಾಲಯ ಪರ್ವತಗಳು. ಅದು ಹೇಗೆ ಅಂತ ತಿಳ್ಕೊಳ್ಳೋಣ ಬನ್ನಿ!

ಕೋಟ್ಯಂತರ ವರ್ಷಗಳ ಕೆಳಗೆ ಈ ಭೂಮಿಯ ಮೇಲಿನ ಖಂಡಗಳು, ನಾವು ಈಗ ಅಟ್ಲಾಸ್, ಗೂಗಲ್ ಮ್ಯಾಪ್`ನಲ್ಲಿ ಕಾಣುವಂತೆ ಇರಲಿಲ್ಲ! ಏಳು ಖಂಡಗಳಾಗಿಯೂ ಇರಲಿಲ್ಲ! ಈ ಏಳೂ ಖಂಡಗಳೂ ಒಂದೇ ಭೂರಾಶಿಯಾಗಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ! ಅಂದರೆ ಮಹಾ  ಕಡಲಿನಲ್ಲಿ ತೇಲಿಬಿಟ್ಟ ತಟ್ಟೆಯ ಹಾಗೆ (ಇವು ನೀರಿನಲ್ಲಿ ತೇಲುವ ತಟ್ಟೆಗಳಾಗಿರದೆ ಭೂಗರ್ಭದಲ್ಲಿನ ಕರಗಿದ ಲಾವಾರಸದ ನಿರಂತರ ಚಲನೆಯ ಪ್ರಭಾವದಿಂದ ಮೇಲ್ಪದರದ ತಟ್ಟೆಗಳು ಅಲೆಯುತ್ತಿರುತ್ತವೆ)! ಹೀಗೆ ಕೋಟ್ಯಂತರ ವರ್ಷಗಳಿಂದ ಖಂಡಗಳು ಬೇರ್ಪಡುತ್ತ, ಹಾಗೇ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ ಕಾಲಕ್ರಮೇಣ ಈ ಭೂಖಂಡಗಳು ಬೇರೆ ಬೇರೆ ಭಾಗಗಳಾದವು!


ಚಿತ್ರ 1: ಭೂಮಿಯ ಮೇಲ್ಮೈ ೨೦ ಕೋಟಿ ವರ್ಷಗಳ ಹಿಂದೆ

ಚಿತ್ರ 1 ರಲ್ಲಿ ತೋರಿಸಿರುವಂತೆ ಮೊದಲು ಭಾಗವಾದದ್ದು ಲಾರೇಶಿಯಾ(Laurasia, ಈಗಿನ ಉತ್ತರ ಅಮೇರಿಕ, ಯುರೋಪ್, ಏಷ್ಯಾ ಮತ್ತು ಆರ್ಕಟಿಕ್ ಖಂಡಗಳನ್ನು ಒಳಗೊಂಡಂತಹ) ಮತ್ತು ಗೊಂಡ್ವಾನಾ(Gondwana, ಈಗಿನ ದಕ್ಷಿಣ ಅಮೇರಿಕ, ಆಫ್ರಿಕಾ, ಭಾರತ ಉಪಖಂಡ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ)ಗಳನ್ನು ಒಳಗೊಂಡಂಥ ಎರಡು ಭಾಗಗಳಾಗಿ ಬೇರ್ಪಟ್ಟವು. 
ಚಿತ್ರ 2: ಭಾರತ ಭೂಖಂಡದ ಚಲನೆ


ಚಿತ್ರ 2 ರಲ್ಲಿ ತೋರಿಸಿರುವಂತೆಗೊಂಡ್ವಾನ ಭೂರಾಶಿಯ ಇತರೆ ತಟ್ಟೆಗಳಂತೆ ಭಾರತ ಉಪಖಂಡದ ತಟ್ಟೆಯು ಸುಮಾರು ೧೦ ಕೋಟಿ(೧೦೦ ಮಿಲಿಯ) ವರ್ಷಗಳ ಹಿಂದೆ ಬೇರ್ಪಟ್ಟು ಉತ್ತರಕ್ಕೆ ಚಲಿಸುತ್ತಾ ಭೂಮಧ್ಯ ರೇಖೆಯನ್ನು ದಾಟಿ, ಸುಮಾರು ೧ ಕೋಟಿ ವರ್ಷಗಳ ಹಿಂದೆ ಯೂರೇಷಿಯಾದ ತಟ್ಟೆಗೆ ಅಪ್ಪಳಿಸಿ, ಪೂರ್ವದ ಭೂತಾನ್ ನಿಂದ ಪಶ್ಚಿಮದ ಅಫ್ಘಾನಿಸ್ತಾನದ ವರೆಗೆ ಹರಡಿಕೊಂಡಿರುವ ಹಿಮಾಲಯ ಪರ್ವತಗಳ(ಭೂಮಿಯ ಅತ್ಯಂತ ಕಿರಿವಯಸ್ಸಿನ ಪರ್ವತಗಳ) ಹುಟ್ಟಿಗೆ ಕಾರಣವಾಯಿತು.

ಭಾರತ ಉಪಖಂಡದ ತಟ್ಟೆಯು ಈಗಲೂ ವರ್ಷಕ್ಕೆ ೫-೬ ಸೆಂಟಿಮೀಟರಿನಷ್ಟು ಉತ್ತರಕ್ಕೆ ಒತ್ತರಿಸುತ್ತಲೇ ಇರುವುದರಿಂದ ಹಿಮಾಲಯದ ಪರ್ವತಗಳು ವರ್ಷಕ್ಕೆ ಅರ್ಧ ಸೆಂಟಿಮೀಟರಿನಷ್ಟು ಎತ್ತರ ಬೆಳೆಯುತ್ತಲೇ ಇವೆ. ಮುಂದಿನ ೧ ಕೋಟಿವರ್ಷಗಳಲ್ಲಿ ಭಾರತ ಉಪಖಂಡವು ಉತ್ತರಕ್ಕೆ ೧೫೦೦ ಕಿ.ಮೀ. ಗಳಷ್ಟು ದೂರ ಚಲಿಸಬಹುದು ಎಂಬುದು ವಿಜ್ಞಾನಿಗಳ ಅಂಬೋಣ. ಅಷ್ಟರಲ್ಲಿ ಮನುಷ್ಯ ಕುಲವು ಉಳಿದಿರುತ್ತದೆಯೋ ಇಲ್ಲವೋ ಎಂಬುದು ಪ್ರಕೃತಿಯೇ ನಿರ್ಧರಿಸುತ್ತದೆ.

ನೀವು ಎವರೆಸ್ಟ್ ಅಥವಾ ಹಿಮಾಲಯದ ಇನ್ಯಾವುದೊ ಶಿಖರವನ್ನು ನೀವು ಹತ್ತಿ ಇಳಿಯುವಷ್ಟರಲ್ಲಿ ಕಣ್ಣಿಗೆ ನಿಲುಕದಷ್ಟು ಪ್ರಮಾಣದಲ್ಲಿ ಚೂರೇ-ಚೂರು ಎತ್ತರವಾಗಿರುತ್ತದೆ! ನಾನು ಇನ್ನೂ ಬೆಳೆದಿದ್ದೇನೆ ನನ್ನ ಮೆಟ್ಟಿ ನಿಲ್ಲುವೆಯಾ ಎಂದು ಪಂಥಾಹ್ವಾನ ನೀಡುತ್ತಿರುತ್ತದೆ!

ಪ್ರಕೃತಿಯ ವಿಸ್ಮಯಗಳ ನಡುವೆ ಮಾನವನು ಎಂದಿಗೂ ಕುಬ್ಜನೇ! ವಿಜ್ಞಾನದ ಇನ್ನೊಂದು ಸ್ವಾರಸ್ಯಕರ ವಿಷಯದೊಂದಿಗೆ ಮತ್ತೆ ಭೇಟಿಯಾಗೋಣ!

ಅಲ್ಲಿಯವರೆಗೆ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ತಿಳಿಸಿ.

ವಿಜ್ಞಾನದ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸುವ ಸಣ್ಣ ಪ್ರಯತ್ನ ನನ್ನದು! ಇನ್ನೂ ಸರಳವಾಗಿ ತಿಳಿಸಬೇಕಿದ್ದರೂ ತಿಳಿಸಿ, ಮುಂದಿನ ಲೇಖನಗಳಲ್ಲಿ ಪ್ರಯತ್ನಿಸುತ್ತೇನೆ.

ಮತ್ತೆ ಸಿಗೋಣ!

ನಿಮ್ಮವ

 - ನಾಗರಾಜ ಸಾಠೆ

ಚಿತ್ರ ಕೃಪೆ: ಗೂಗಲ್ ಹುಡುಕಾಟ

2 comments: