Wednesday, June 26, 2013

ನಿಲ್ಲದ ರೈಲುಗಳು, ಓಡುವ ನಿಲ್ದಾಣಗಳು!

ಆಕಾಶದ ಮೂರನೆ ತಾರೆ ರೈಲು ಗಾಡಿಯ ಭವಿಷ್ಯದ ಕತೆ ಹೇಳುತ್ತಿದೆ, ಕೇಳಬನ್ನಿ.

ಹಿಸಿಕೊಳ್ಳಿ: ಮುಂದೊಂದು ದಿನ ನೀವು ದಿಲ್ಲಿಯಿಂದಲೋ ಅಥವಾ ಮುಂಬೈನಿಂದಲೋ ರೈಲಿನಲ್ಲಿ ಹೊರಟಿದ್ದೀರಿ. ಗಾಡಿ ಗಂಟೆಗೆ ನೂರೋ ನೂರೈವತ್ತೋ ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. ಆದರೆ ಪ್ರತಿಯೊಂದು ಹಳ್ಳಿ ಪಟ್ಟಣ ಬಂದಾಗ ರೈಲು ನಿಲ್ಲುತ್ತಲೇ ಇಲ್ಲ, ಹಾಳಾಗಿ ಹೋಗ್ಲಿ ನಮ್ಮ ಊರು ಬಂದಾಗ ನಿಂತರೆ ಸಾಕು ಎಂದು ಕೊಂಡು ಸುಮ್ಮನಾಗುತ್ತೀರಿ, ನಿಮ್ಮ ಊರೂ ಬಂತು ರೈಲಿನ ಬ್ರೇಕ್ ಶಬ್ದವೂ ಕೇಳುತ್ತಿಲ್ಲ - ವೇಗವೂ ಕಡಿಮೆಯಾಗುತ್ತಿಲ್ಲ. ಇದೇನು?! ಯಾವ ರಾಜ್ಯದ ಸಂಸದರ ಲಾಬಿಯಿಂದ ನಮ್ಮ ಊರನ್ನು ಹಾದು ಹೋಗೋ ರೈಲು ನಮ್ಮೂರಿನಲ್ಲಿಯೇ ನಿಲ್ಲುವುದಿಲ್ಲ!. ಬಹಳ ಅನ್ಯಾಯ ಎಂದು ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಫೋನಾಯಿಸಲು ಕಿಸೆಗೆ ಕೈ ಹಾಕುತ್ತೀರಿ. ಅಷ್ಟರಲ್ಲಿಯೇ ಅಶರೀರ ವಾಣಿಯೊಂದು ತೇಲಿಬಂದು ನಿಮ್ಮ ಕಿವಿ ಮುಟ್ಟುತ್ತದೆ. "ಮುಂಬೈನಿಂದ ಹೊರಟ ಗಾಡಿಯು 'ನಿಮ್ಮ ಊರು' ತಲುಪುತ್ತಿದೆ. ಇಳಿಯಲು ಬಯಸುವ ಪ್ರಯಾಣಿಕರು ದಯಮಾಡಿ ನಿಮ್ಮೂರಿನಲ್ಲಿಯೇ ಕಳಚಲು ಸಿದ್ಧವಾಗಿರುವ ಬೋಗಿಯನ್ನು ಒಂದು ನಿಮಿಷದಲ್ಲಿ ಪ್ರವೇಷಿಸಲು ವಿನಂತಿಸುತ್ತೇವೆ. ಧನ್ಯವಾದಗಳು." ಓಹೋ!ಹೀಗೋ ವಿಷಯ ಎಂದುಕೊಂಡು ನಿಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಕಳಚಲಿರುವ ಬೋಗಿಗೆ ಬಂದು ನಿಲ್ಲುತ್ತೀರಿ. ಬೋಗಿಯ ಬಾಗಿಲು ತಂತಾನೆ ಮುಚ್ಚಿಕೊಳ್ಳುತ್ತದೆ. ಬೋಗಿಯ ವೇಗ ತಗ್ಗುತ್ತಾ ಮತ್ತೆ ನಯವಾಗಿ ಬಾಗಿಲುಗಳು ತೆರೆದುಕೊಳ್ಳಲು ನಿಮ್ಮೂರಿನ ರೈಲು ನಿಲ್ದಾಣದ ದರುಶನವಾಗಿ ನಿಟ್ಟುಸಿರು ಬಿಡುತ್ತೀರಿ. 

ಇದೇನಪ್ಪಾ ವಿಜ್ಞಾನದ ಬರಹ ಅಂತ ಹೇಳಿ ಅಜ್ಜಿ ಕತೆ ಹೇಳ್ತಿದ್ದೇನೆ ಅಂದು ಕೊಂಡಿರಾ? ಖಂಡಿತ ಇಲ್ಲ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಒಂದು ನಿಲ್ದಾಣದಿಂದ ಹೊರಟ ರೈಲನ್ನು ಮಧ್ಯ ಬರುವ ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೇ ನೇರ ಕೊನೆಯ ನಿಲ್ದಾಣದಲ್ಲಿ ನಿಲ್ಲಿಸಲು ಭಾರಿ ಪ್ರಯೋಗಗಳು ನಡೆಯುತ್ತಿವೆ. ಹೇಗೆ ಅಂತೀರಾ ಈ ದೃಶ್ಯ ನೋಡಿ.



ದೃಶ್ಯದಲ್ಲಿ ಕಂಡದ್ದನ್ನು ಪದಗಳಲ್ಲಿ ಇಳಿಸೋಣ,  ಅತ್ಯಂತ ವೇಗದಲ್ಲಿ ಚಲಿಸುತ್ತಿರುವ ರೈಲೊಂದಕ್ಕೆ ಇನ್ನೊಂದು ಪುಟಾಣಿ ರೈಲು ಬಂದು ಕೂಡಿಕೊಳ್ಳುತ್ತದೆ. ತಕ್ಷಣ ಬಾಗಿಲುಗಳು ತೆರೆದುಕೊಂಡು ಇಳಿಯುವ ಹಾಗು ಹತ್ತುವ ಪ್ರಯಾಣಿಕರು ಅದಲು ಬದಲಾಗುತ್ತಾರೆ. ಹಾಗೆಯೇ ಬಾಗಿಲುಗಳನ್ನು ಮುಚ್ಚಿಕೊಂಡ ಮುಖ್ಯ ರೈಲು, ಪುಟಾಣಿ ರೈಲಿನ ಸಂಬಂಧ ಕಡಿದುಕೊಂಡು ಮುಂದೆ ಸಾಗುತ್ತದೆ. ಪುಟಾಣಿ ರೈಲು ತನ್ನ ವೇಗವನ್ನು ಕುಗ್ಗಿಸುತ್ತಾ ನಿಲ್ಲುತ್ತದೆ ಅಥವಾ ಇನ್ನೊಂದು ನಿಲ್ದಾಣವನ್ನು ತಲುಪುತ್ತದೆ.

ಈ ಕಲ್ಪನೆಯ ಮೂಲ ಉದ್ದೇಶ ರೈಲು ಪ್ರಯಾಣದ ಸಮಯದಲ್ಲಿ, ನಿಲ್ದಾಣಗಳಲ್ಲಿ ರೈಲು ತನ್ನ ವೇಗವನ್ನು ಕಡಿಮೆ ಮಾಡುತ್ತಾ ನಿಲ್ಲಿಸಲು, ರೈಲು ಗಾಡಿಯು ನಿಗದಿತ ಸಮಯ ನಿಲ್ದಾಣದಲ್ಲಿ ನಿಂತು, ಹೊರಟ ಬಳಿಕ ಮತ್ತೆ ತನ್ನ ವೇಗವನ್ನು ಪಡೆಯಲು ತಗಲುವ ಸಮಯ ಹಾಗು ಇಂಧನ ವೆಚ್ಚವನ್ನು ಗಣನೀಯವಾಗಿ ಇಳಿಸುವುದೇ ಆಗಿದೆ.

ಉದಾಹರಣೆಗೆ: 'ಅ' ಎಂಬ ನಗರದಿಂದ 'ಬ' ಎಂಬ ನಗರದಿಂದ ೫೦೦ ಕಿ.ಮೀ. ದೂರವಿದೆ ಎಂದುಕೊಳ್ಳಿ, ಹಾಗೆಯೇ ಈ ನಗರಗಳ ಮಧ್ಯೆ ೧೦ ನಿಲ್ದಾಣಗಳಿದ್ದಲ್ಲಿ, ಗಂಟೆಗೆ ಸರಾಸರಿ ೧೦೦ ಕಿ.ಮೀ. ವೇಗದಲ್ಲಿ ಹೊರಟ ರೈಲು ಪ್ರತಿ ನಿಲ್ದಾಣದಲ್ಲಿ ೫ ನಿಮಿಷ ನಿಂತು ಹೊರಟರೆ ೫೦ ನಿಮಿಷ ರೈಲು ನಿಂತಲ್ಲಿಯೇ ಸಮಯ ವ್ಯರ್ಥವಾಯಿತಲ್ಲವೇ? ಹಾಗೆಯೇ ಪ್ರತಿ ನಿಲ್ದಾಣದಲ್ಲಿ ರೈಲಿನ ವೇಗ ಇಳಿಸಲು ಹಾಗು ಹೆಚ್ಚಿಸಲು ೧ ನಿಮಿಷ(ಇದು ಕೇವಲ ಲೆಕ್ಕ ಸುಲಭವಾಗಿಸಲು!) ಕಾಲಾವಕಾಶ ತೆಗೆದುಕೊಂಡಲ್ಲಿ ಒಟ್ಟು ೧೦ ನಿಮಿಷ ಇದಕ್ಕೇ ಬೇಕಾಗುತ್ತದೆ. ಹೀಗೆ ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ಹೊರಟ ರೈಲು 'ಬ' ನಗರ ತಲುಪಲು ೫ ಗಂಟೆ ಪ್ರಯಾಣಿಸಲು ಹಾಗು ಒಂದು ಗಂಟೆ(ಬೇರೆ ಬೇರೆ ನಿಲ್ದಾಣಗಳಲ್ಲಿ) ನಿಲ್ಲಲು, ಒಟ್ಟು ೬ ಗಂಟೆಗಳು ಬೇಕಾಗುತ್ತದೆ. ಇದೇ ರೈಲು ನಿಲ್ಲದೇ ಓಡಿದಾಗ 'ಬ' ನಗರ ತಲುಪಲು ೫ ಗಂಟೆಯೇ ಸಾಕಾಗುವುದಲ್ಲವೇ?
ಈ ೫ ನಿಲ್ದಾಣಗಳಲ್ಲಿ ಜನರನ್ನು ಇಳಿಸಲು ಹಾಗು ಹತ್ತಿಸಲು ರೈಲಿಗೆ ಸೇರಿಕೊಳ್ಳುವ ಒಂದು ಬೋಗಿ (ಇಂಜಿನ್ ಸಹಿತ) ಬೇಕಾಗುತ್ತದೆ.

ಹೇಗಿದೆ ಉಪಾಯ!


ನಿಲ್ಲದ ರೈಲುಗಳಲ್ಲಿ ಪ್ರಯಾಣಿಸಲು ಸಿದ್ಧರಿದ್ದೀರಲ್ಲವೇ.
ಮತ್ತೊಂದು ಸ್ವಾರಸ್ಯಕರ ವಿಷಯದೊಂದಿಗೆ ಭೇಟಿಯಾಗೋಣ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು 'ಕಮೆಂಟ್ಸ್' ಮೂಲಕ ಹಂಚಿಕೊಳ್ಳಿ.
ಇಂತಿ ನಿಮ್ಮವ,
ನಾಗರಾಜ ಸಾಠೆ

ಮೂಲ ಸಾಹಿತ್ಯ, ದೃಶ್ಯ ಕೃಪೆ: ಅಂತರ್ಜಾಲ

Saturday, March 23, 2013

ನಾವು ಏಕೆ ಆಕಳಿಸುತ್ತೇವೆ?

ಅಂಗೈಯಲ್ಲಿ ಆಕಾಶದ ಎರಡನೇ ನಕ್ಷತ್ರವಿಂದು ಬಾಯ್ದೆರೆದು ಆಕಳಿಸುತ್ತಿದೆ ನೋಡಬನ್ನಿ. 

ಹೀಗೆ ಮಾಡಿ ನೋಡಿ: 

ಮುಂದಿನ ಬಾರಿ ನೀವು ಒಂದು ಗುಂಪಿನ ನಡುವೆ ಇದ್ದಾಗ ಮನಸೋ-ಇಚ್ಛೆ ಆಕಳಿಸಿ ಬಿಡಿ. ನಂತರ ನಿಮ್ಮನ್ನು ಎಷ್ಟು ಜನ ಅನುಸರಿಸುತ್ತಾರೆಂದು ನೋಡಿ!?
ಮತ್ತೆ ನೀವು ಈ ಬರಹವನ್ನು ಓದಿ ಮುಗಿಸುವಷ್ಟರಲ್ಲಿ ಒಮ್ಮೆಯಾದರೂ ಆಕಳಿಸಿದ್ದಲ್ಲಿ ನನ್ನನ್ನು ನಿಂದಿಸಬೇಡಿ.

ಆಕಳಿಕೆ ಏಕೆ ಬರುತ್ತದೆ?

ಈ ಪ್ರಶ್ನೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೇಳಿದ್ದಲ್ಲಿ ಉತ್ತರ ಸಲೀಸಾಗಿ ಸಿಗುತ್ತದೆ: "ಆ ಮಾಸ್ತರು ತುಂಬಾ bore ಹೊಡೆಸುತ್ತಾರೆಂದು".  ಹಾಗಾದರೆ ಇದೊಂದೇ ಕಾರಣವೆ ಆಕಳಿಸಲು? ಇಲ್ಲ. 
ಸಾಮಾನ್ಯವಾಗಿ ನಮಗೆ ನಿದ್ದೆ ಬರುವಾಗ, ನಿದ್ದೆಯಿಂದ ಎದ್ದಾಗ, ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದಾಗ ಅಥವಾ ಯಾರಾದರು ಆಕಳಿಸುವುದನ್ನು ನೋಡಿದಾಗ ಆಕಳಿಸಬೇಕೆನಿಸುತ್ತದೆ(ಕೆಲವೊಮ್ಮೆ ಆಕಳಿಸುತ್ತಿರುವ ಭಾವಚಿತ್ರವನ್ನು ಅಥವಾ ದೃಶ್ಯವನ್ನು ನೋಡಿದಾಗಲೂ ಆಕಳಿಕೆ ಬರುವುದುಂಟು!). ಆಕಳಿಕೆ ಅಂಟು ಜಾಡ್ಯ ಹಾಗು ನಮ್ಮ ಹತೋಟಿಯಲ್ಲಿಲ್ಲದ್ದು ಎಂಬುದು ಎಲ್ಲರೂ ಒಪ್ಪುವಂಥ ಮಾತು. 
ಗರ್ಭದಲ್ಲಿರುವ ೧೧ ವಾರಗಳ ಭ್ರೂಣವೂ ಆಕಳಿಸುತ್ತದೆ ಎಂದು ಇತ್ತೀಚಿಗೆ ವಿಜ್ಞಾನಿಗಳು ವರದಿ ಮಾಡಿದ್ದಾರಂತೆ!.

ಆಕಳಿಕೆ ಬಗೆಗಿನ ಸಿದ್ಧಾಂತಗಳು:

 ಆಕಳಿಕೆ ಎಂಬುದು ಸರ್ವವ್ಯಾಪಿ ಹಾಗೂ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದರೂ, ಇದರ ಮೂಲ ಕಾರಣ ವಿಜ್ಞಾನಿಗಳಿಗೆ ಇನ್ನೂ ಎಟುಕದ ದ್ರಾಕ್ಷಿಯಾಗಿರುವುದು ಸೋಜಿಗವೇ ಸರಿ. ಇಷ್ಟಾಗಿಯೂ ಪ್ರಚಲಿತದಲ್ಲಿ ಆಕಳಿಕೆಯ ಕಾರಣದ ಬಗೆಗೆ ನಾನಾ ಸಿದ್ಧಾಂತಗಳಿವೆ. ಅವುಗಳಲ್ಲಿ ಮುಖ್ಯವಾದವು:
೧. ಶಾರೀರಿಕ ಸಿದ್ಧಾಂತ: 
ನಮ್ಮ ಶ್ವಾಸಕೋಶದಲ್ಲಿ(ಉಸಿರು ಪೆಟ್ಟಿಗೆಯಲ್ಲಿ!) ಇಂಗಾಲದ ಡೈ ಆಕ್ಸೈಡಿನ (CO2)  ಪ್ರಮಾಣ ಹೆಚ್ಚಾದಾಗ ಅಥವಾ ಹೆಚ್ಚು ಆಮ್ಲಜನಕ(O2) ಬೇಕೆನಿಸಿದಾಗ ನಾವು ಆಕಳಿಸುತ್ತೇವೆ. ದೊಡ್ಡ ಗುಂಪುಗಳಲ್ಲಿ ಅಥವಾ ಮುಚ್ಚಿದ ಕೋಣೆಗಳಲ್ಲಿದ್ದಾಗ ಹೆಚ್ಚು ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿದ್ದು ನಮ್ಮ ಉಸಿರು ಪೆಟ್ಟಿಗೆ ಸೇರುತ್ತದೆ. ಅದನ್ನು ಹೋಗಲಾಡಿಸಲು ನಾವು ಆಕಳಿಸುತ್ತೇವೆಂಬುದು ಸಮಂಜಸವೆನಿಸುತ್ತದೆ.
೨. ವಿಕಾಸವಾದ (Evolution Theory):
ಮಾಡುತ್ತಿರುವ  ಕೆಲಸವನ್ನು ಬದಲಾಯಿಸುವಂತೆ ಸೂಚಿಸಲು, ನಮ್ಮ ಪೂರ್ವಜರು ಆಕಳಿಸುತ್ತಿದ್ದರಂತೆ. ಇದೇ ಅಭ್ಯಾಸ ತಲೆಮಾರುಗಳಿಂದ ನಮಗೆ ಬಳುವಳಿಯಾಗಿ ಬಂದಿದೆಯೆನ್ನುವುದು ಇನ್ನೊಂದು ವಾದ.
೩. ಬೇಸರಿಕೆ:
ನಾವು ಮಾಡುತ್ತಿರುವ ಅಥವಾ ನೋಡುತ್ತಿರುವ ಕೆಲಸದಲ್ಲಿ ಉತ್ಸಾಹ ಇಲ್ಲದೇ ಇದ್ದಾಗ, ಬೇಸರಿಕೆಯಿಂದ ಆಕಳಿಕೆ ಉಂಟಾಗುತ್ತದೆಂದು ಪ್ರತಿಪಾದಿಸುತ್ತಾರೆ. ಹಾಗಿದ್ದಲ್ಲಿ, ಇನ್ನೇನು ಬಾಹ್ಯಾಕಾಶ ಯಾನ ಪ್ರಾರಂಭಿಸುತ್ತಿರುವ ಯಾನಿಗೂ, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಸ್ಪರ್ಧೆಯಾಳಿಗೂ ಆಕಳಿಕೆ ಬರುತ್ತದಲ್ಲವೇ? ಅದು ಹೇಗೆ?
೪. ಮಿದುಳಿನ ಉಷ್ಣತೆ ಸರಿದೂಗಲು:
ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಿದುಳಿನ ಉಷ್ಣತೆಯು ಸರಾಸರಿ ತಾಪಮಾನಕ್ಕಿಂತ ಹೆಚ್ಚಾದಾಗ, ಆಕಳಿಕೆ ಬಂದು ಮಿದುಳಿನ ಉಷ್ಣತೆ ಕಡಿಮೆಯಾಗಲು ಸಹಕರಿಸುವುದಂತೆ.

ಸಿದ್ಧಾಂತಗಳು ಒಂದೆಡೆಯಿರಲಿ,
ನಿಮಗಿದು ಗೊತ್ತೇ? ಬೆನ್ನು ಮೂಳೆಯಿರುವ ಎಲ್ಲಾ ಪ್ರಾಣಿಗಳೂ(ಮೀನಿನಿಂದ ಶುರುಮಾಡಿ ಆಕಳಿನ ವರೆಗೆ) ಆಕಳಿಸುತ್ತವೆಯೆಂದು!.

ಹಾಗೇ ಪುರಾಣಗಳ ವಿಚಾರಕ್ಕೆ ಬಂದರೆ ಮಹಾವಿಷ್ಣುವು ಮತ್ಸ್ಯಾವತಾರ ತಾಳುವುದಕ್ಕೂ ಆಕಳಿಕೆಯೇ ಕಾರಣ. ಚತುರ್ಮುಖ ಬ್ರಹ್ಮನು ಆಕಳಿಸಿದಾಗ ಹೊರಬಂದ ವೇದಗಳನ್ನು ಹಯಗ್ರೀವನೆಂಬ ದಾನವನು ಕದ್ದನಂತೆ!.

ಆ ಕಥೆ ಹಾಗಿರಲಿ,
ಆಕಳಿಕೆ ಬಗ್ಗೆ ಸ್ವಾರಸ್ಯಕರ ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ಇಲ್ಲಿ ಹಂಚಿಕೊಳ್ಳಿ.

ನಿಮ್ಮವ,
ನಾಗರಾಜ ಸಾಠೆ


ಸಾಹಿತ್ಯ,ಚಿತ್ರ ಕೃಪೆ: ಅಂತರ್ಜಾಲ
 

Sunday, January 6, 2013

ನಕ್ಷತ್ರ ೧: ವಿದ್ಯುತ್ ಮೋಟರುಗಳು ಹೇಗೆ ಕೆಲಸಮಾಡುತ್ತವೆ?

ಇಂದು ನಾವು ಮನೆ ಮನೆಗಳಲ್ಲಿ ಉಪಯೋಗಿಸುವ ವಿದ್ಯುತ್ ಬೀಸಣಿಗೆ(ಫ್ಯಾನ್)ಗಳಿಂದ ಹಿಡಿದು ಆಕಾಶದಲ್ಲಿ ಹಾರಾಡುವ ವಿಮಾನಗಳಲ್ಲಿಯೂ ಸ್ಥಾನ ಪಡೆದಿರುವ ವಿದ್ಯುತ್ ಮೋಟರುಗಳ ಕಾರ್ಯವೈಖರಿಯ ಮೂಲ ಸಿದ್ಧಾಂತದ ಮೇಲೆ,  "ಅಂಗೈ ಆಕಾಶ" ಮೊದಲ ನಕ್ಷತ್ರದ ಮೂಲಕ ಬೆಳಕು ಚೆಲ್ಲಲು ಯತ್ನಿಸುತ್ತಿದೆ. ಮೋಟರುಗಳ ಮೂಲ ಮಂತ್ರವನ್ನು ತಿಳಿಯುವ ಕುತೂಹಲವಿದ್ದಲ್ಲಿ ಮುಂದುವರೆಯಿರಿ.

ಅಯಸ್ಕಾಂತಗಳು(Magnets)

 ಚಿತ್ರ ೧. ಪಟ್ಟಿ ಅಯಸ್ಕಾಂತ ಮತ್ತು ಅದರ ಕಾಂತ ಕ್ಷೇತ್ರ.
ಎಲ್ಲಾ ವಿದ್ಯುತ್ (ನೇರ/ಪರ್ಯಾಯ (AC/DC) ) ಮೋಟರುಗಳು ಕಾಂತೀಯತೆಯ(magnetism) ಅಡಿಯಲ್ಲಿ ಕೆಲಸಮಾಡುತ್ತವೆ.
ನಾವು ನಮ್ಮ ಚಿಕ್ಕಂದಿನಲ್ಲಿ ಅಯಸ್ಕಾಂತಗಳೊಂದಿಗೆ ಆಡಿರುತ್ತೇವೆ ಮತ್ತು ಶಾಲೆಯ ಪಾಠಗಳಲ್ಲಿ ಅಯಸ್ಕಾಂತಗಳ ಬಗ್ಗೆ ಕಲಿತಿರುತ್ತೇವೆ. ಯಾವುದೇ ಅಯಸ್ಕಾಂತವು ಒಂದು ಉತ್ತರ ಹಾಗು ಒಂದು ದಕ್ಷಿಣ ಧ್ರುವವನ್ನು ಹೊಂದಿರುತ್ತದೆ. ಹಾಗೆಯೇ ಎರಡು ಪಟ್ಟಿಯಂತಹ ಅಯಸ್ಕಾಂತಗಳನ್ನು(Bar Magnets) ಹತ್ತಿರ ತಂದಲ್ಲಿ ಸಮಧ್ರುವ ಗಳು ದೂರತಳ್ಳಲ್ಪಡುತ್ತವೆ ಹಾಗು ವಿರುದ್ಧ ಧ್ರುವಗಳು ಹತ್ತಿರ ಸೆಳೆಯಲ್ಪಡುತ್ತವೆ ಎಂಬುದು ನಮಗೆ ತಿಳಿದ ವಿಚಾರವೇ ಸರಿ.
ಚಿತ್ರ ೨. ಮಧ್ಯದ ಅಯಸ್ಕಾಂತವು ಸಮ ಧ್ರುವಗಳಿಂದ ದೂರ ತಳ್ಳಲ್ಪಡುತ್ತಾ, ವಿರುದ್ಧ ಧ್ರುವಗಳು ಸೆಳೆಯಲ್ಪಡುತ್ತವೆ.

ಈಗ ಚಿತ್ರ ೨ರಲ್ಲಿ ತೋರಿಸಿರುವಂತೆ ಮೂರು ಅಯಸ್ಕಾಂತಗಳನ್ನು ತೆಗೆದುಕೊಂಡು; ಎಡ, ಬಲದ ಅಯಸ್ಕಾಂತಗಳನ್ನು ಸ್ಥಿರವಾಗಿ ನಿಲ್ಲಿಸಿ, ಮಧ್ಯದ ಅಯಸ್ಕಾಂತವು ತನ್ನ ಮಧ್ಯ ಬಿಂದುವಿನ ಸುತ್ತ ತಿರುಗಲು ಅವಕಾಶವಿರುವಂತೆ ಜೋಡಿಸಿದ್ದಲ್ಲಿ; ವಿರುದ್ಧ ಧ್ರುವಗಳ ಸೆಳೆತದಿಂದ ಮಧ್ಯದ ಅಯಸ್ಕಾಂತವು ತಿರುಗುತ್ತಾ ಚಿತ್ರ ೩ ರಲ್ಲಿ ತೋರಿಸಿರುವ ಸ್ಥಿತಿಗೆ ಬಂದು ನಿಲ್ಲುತ್ತದೆ.
ಚಿತ್ರ ೩. ಮಧ್ಯದಲ್ಲಿರುವ ಅಯಸ್ಕಾಂತದ ಧ್ರುವಗಳನ್ನು ಬದಲಿಸದೆ ಹೋದಲ್ಲಿ ಮೂರು ಅಯಸ್ಕಾಂತಗಳು ಇದೇ ಸ್ಥಿತಿಯಲ್ಲಿರುತ್ತವೆ.

ಈಗ ಮಧ್ಯ ಅಯಸ್ಕಾಂತದ ಧ್ರುವಗಳನ್ನು ಬದಲಿಸಿದರೆ(ಚಿತ್ರ ೨ ರಂತೆ) ಮೇಲೆ ತಿಳಿಸಿದ ಕ್ರಿಯೆಯು ಪುನರಾವರ್ತಿಸುತ್ತದೆ. ಹೀಗೆಯೇ ಮಾಡಿದಲ್ಲಿ ಮಧ್ಯದ ಅಯಸ್ಕಾಂತವು ಗಿರಗಿರನೆ ತಿರುಗಲಾರಂಭಿಸುತ್ತದೆ!!.

ಆದರೆ ಸ್ಥಿರ ಅಯಸ್ಕಾಂತಗಳ(permanent magnets) ಧ್ರುವಗಳನ್ನು ಬದಲಾಯಿಸಲಾಗುವುದಿಲ್ಲ. ಮೇಲೆ ತಿಳಿಸಿದ ತತ್ವವನ್ನು ಸಾಧಿಸಲು ವಿದ್ಯುದಯಸ್ಕಾಂತಗಳು ಸಹಾಯಕ್ಕೆ ಬರುತ್ತವೆ.

ವಿದ್ಯುದಯಸ್ಕಾಂತಗಳು(Electro-magnets)  
ಚಿತ್ರ ೪. ವಿದ್ಯುದಯಸ್ಕಾಂತ.

ಒಂದು ಕಬ್ಬಿಣದ ಪಟ್ಟಿಯೊಂದನ್ನು ತೆಗೆದುಕೊಂಡು ವಿದ್ಯುತ್ ವಾಹಕ ತಂತಿಯನ್ನು ಚಿತ್ರ ೪ ರಲ್ಲಿ ತೋರಿಸಿರುವಂತೆ ಸುತ್ತಿದರೆ ವಿದ್ಯುದಯಸ್ಕಾಂತವಾಗುತ್ತದೆ. ವಿದ್ಯುದಯಸ್ಕಾಂತವು ತನ್ನ ಮೂಲಕ ವಿದ್ಯುತ್ ಹರಿಯುತ್ತಿದ್ದಾಗ ಮಾತ್ರ ಕಾಂತೀಯ ಗುಣಗಳನ್ನು ಹೊಂದಿರುತ್ತದೆ ಹಾಗು ವಿದ್ಯುತ್ ಹರಿವು ನಿಂತ ಬಳಿಕ ತನ್ನ ಕಾಂತೀಯ ಗುಣಗಳನ್ನುಕಳೆದುಕೊಳ್ಳುತ್ತದೆ.
ಚಿತ್ರ ೫. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು.

ಚಿತ್ರ ೬. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು (ವಿರುದ್ಧ ದಿಕ್ಕು).


ವಿದ್ಯುತ್ ಹರಿವಿನ ದಿಕ್ಕಿಗನುಸಾರವಾಗಿ, ಚಿತ್ರ ೫ ಮತ್ತು ೬ರಲ್ಲಿ ತೋರಿಸಿರುವಂತೆ ವಿದ್ಯುದಯಸ್ಕಾಂತದ ಧ್ರುವಗಳು ಅದಲು-ಬದಲಾಗುತ್ತವೆ. ಹೀಗೆ ವಿದ್ಯುದಯಸ್ಕಾಂತದ ವಿದ್ಯುತ್ ಹರಿವಿನ ದಿಕ್ಕನ್ನು ಪ್ರತಿ ಬಾರಿ ಬದಲಿಸುತ್ತ ವಿದ್ಯುತ್ ಮೋಟರಿನ ಸಿದ್ಧಾಂತವನ್ನು ಸಾಧಿಸಲಾಗುತ್ತದೆ.


ಚಿತ್ರ ೭. ನೇರ ವಿದ್ಯುತ್ ಮೋಟರಿನ ವ್ಯವಸ್ಥೆ.

ಚಿತ್ರ ೭ ರಲ್ಲಿ ತೋರಿಸಿರುವಂತೆ ಎರಡು ಸ್ಥಿರ(stator) ಬ್ರಶ್(ಗುಂಜು :) )ಗಳು ಹಾಗು ಎರಡು ತಿರುಗಣೆಯ(rotor/commutator) ವ್ಯವಸ್ಥೆಯನ್ನು ಉಪಯೋಗಿಸಿ ಮಧ್ಯದ ಅಯಸ್ಕಾಂತ(ಹಾಗು ತಿರುಗಣೆ) ತಿರುಗಿದಾಗ ವಿದ್ಯುತ್ ಪ್ರವಾಹದ ದಿಕ್ಕು ಬದಲಾಗುತ್ತ ಅಯಸ್ಕಾಂತ ತಿರುಗಲಾರಂಭಿಸುತ್ತದೆ!!. ಇಷ್ಟು ಇಲೆಕ್ಟ್ರಿಕ್ ಮೋಟರಿನ ಮೂಲ ಸಿದ್ಧಾಂತ.

ಚಿತ್ರ ೮. ನೇರ ವಿದ್ಯುತ್ ಮೋಟರ್.

ಹಾ! ಇಷ್ಟೆಲ್ಲಾ ಕಲಿತು "ಇಲೆಕ್ಟ್ರಿಕ್ ಮೋಟರ್"ಗೊಂದು ಕನ್ನಡ ನಾಮಕರಣ ಮಾಡಬೇಡವೇ??
"ವಿದ್ಯುತ್ ಗಿರಗಿಟ್ಲೆ" 
 ಹೇಗಿದೆ?
ನಿಮಗೆ ಬೇರೆ ಹೆಸರುಗಳು ಹೊಳೆದಲ್ಲಿ ತಿಳಿಸಿ.

ಈ ಲೇಖನದ ಬಗ್ಗೆ ’ಕಾಮೆಂಟ್ಸ್’ಗಳ ಮೂಲಕ ಮುಕ್ತವಾಗಿ ಚರ್ಚಿಸಬಹುದು. ಅದರಿಂದ ನಮ್ಮೆಲ್ಲರ ಬುದ್ಧಿಗಿಷ್ಟು ಕಿಚ್ಚು ಹಚ್ಚಬಹುದು.
ಮತ್ತೆ ಇನ್ನೊಂದು ಲೇಖನದೊಂದಿಗೆ ಭೇಟಿಯಾಗೋಣ.

ಚಿತ್ರ ಹಾಗು ಸಿದ್ಧಾಂತ ಕೃಪೆ: ಅಂತರ್ಜಾಲ.