Wednesday, January 20, 2016

ವ್ಯಾಟ್ಗೂಡಿದರೆ ಯುನಿಟ್ಟು


ಬಹಳ ದಿನಗಳ ನಂತರ ಎಲ್ಲರಿಗೂ ಉಪಯುಕ್ತವಾಗುವಂತಹ ಲೇಖನ ಬರೆಯಬೇಕೆಂದು ಮನಸಾಯ್ತು! ಏನು ಬರೆಯೋಣವೆಂದು ಯೋಚಿಸುತ್ತಾ ಕುಳಿತಿದ್ದೆ ತಕ್ಷಣ ಕರೆಂಟು ಹೋಯ್ತು ಆಗಲೇ ಹೊಳೆದದ್ದು ವಿದ್ಯುತ್ ಬಳಕೆಯನ್ನು ಹೇಗೆ ಅಳೆಯುತ್ತಾರೆ ತಿಳಿಯೋಣ - ತಿಳಿಸೋಣವೆಂದು. ಅದರ ಕೃತಿರೂಪವು ಇದೀಗ ನಿಮ್ಮದೇ ಕಣ್ಣುಗಳ ಮೂಲಕ ನಿಮ್ಮ ತಲೆಗೆ ಹೊಕ್ಕುತ್ತಿರುವ ಈ ಲೇಖನ. ಶೀರ್ಷಿಕೆ ಏನಪ್ಪಾ ವಿಚಿತ್ರವಾಗಿದೆ ಎಂದು ಯೋಚಿಸಬೇಡಿ. ಮುಂಜಾನೆ ಸೂರ್ಯನಿಗೆ ಕರಗುವ ಮಂಜಿನಂತೆ ತಿಳಿಯಾಗುತ್ತದೆ, ಓದುತ್ತಾ ಹೋಗಿ. :)

ನಿತ್ಯ ಜೀವನದಲ್ಲಿ ಈ ವಿದ್ಯುತ್ ಅಥವಾ ಜನಜನಿತವಾಗಿರುವ ಕರೆಂಟೆಂಬುದು ಬೆಳಿಗ್ಗೆ ಎದ್ದೇಳಲು ಉಪಯೋಗಿಸುವ ಅಲಾರಂ, ಕೈಲಾಡುವ ಮೊಬೈಲ್ನಿಂದ ಹಿಡಿದು ರಾತ್ರಿ ಮಲಗುವಾಗ ಹಿತ ತರುವ ಫ್ಯಾನ್(ವಿದ್ಯುತ್ ಬೀಸಣಿಗೆ)ಗಳೂ ಸಹ ಕೆಲಸಮಾಡಲು ಬೇಕಾದ ಅಗೋಚರ ಶಕ್ತಿಯಾಗಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಷ್ಟೇ ಏಕೆ ಹಸಿದಾಗ ತಟ್ಟೆಗೆ ಬಂದು ಬೀಳುವ ರುಚಿಕರ ತಿಂಡಿ-ಊಟಗಳನ್ನು ಮಾಡಲು ಬೇಕಾಗುವ ಧಾನ್ಯಗಳು ತರಕಾರಿಗಳನ್ನು ಬೆಳೆಯಲು ನೀರು ಹಾಯಿಸಬೇಡವೆ? ಅದಕ್ಕೂ ನಮ್ಮ ಆಪ್ತಮಿತ್ರ ಕರೆಂಟಿನ ಉಪಸ್ಥಿತಿ ಇರಲೇಬೇಕು!

ಪ್ರತಿ ತಿಂಗಳೂ ಬಂದ ಕರೆಂಟ್ ಬಿಲ್ಲಿನ ಮೊತ್ತನೋಡಿ ತಮ್ಮ ಮನೆಯವರಿಗೋ ಸರ್ಕಾರಕ್ಕೋಹಿಡಿಶಾಪ ಹಾಕುತ್ತಾ ಹಣಪಾವತಿ ಕೌಂಟರ್ ಗೆ ಹೋಗಿ ಅಥವಾ ಅಂತರ್ಜಾಲವೆಂಬ ಸೋಮಾರಿ ಕಟ್ಟೆಯಲ್ಲಿಯೇ ಕುಳಿತು, ಇನ್ನಷ್ಟು ಮುಂದುವರೆದು ‘ಆ್ಯಪ್’ ಎಂಬ ಅಂಗೈಲಿರುವ ಮಂಗನ(ನಾನು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸಿ ಮಾತನಾಡುತ್ತಿಲ್ಲ!) ಸಹಾಯದಿಂದ ಹಣಕಟ್ಟಿ ಕೈತೊಳೆದುಕೊಂಡುಬಿಡುತ್ತೇವೆ. ಯಾವತ್ತೂ ನಾವು ತಿಂಗಳ ವಿದ್ಯುತ್ ಬಳಕೆಯೆಷ್ಟು? ವಿದ್ಯುತ್ ಪೂರೈಕೆದಾರರು ನಮ್ಮ ವಿದ್ಯುತ್ ಬಳಕೆಗೆ ಈ ಮೊತ್ತವನ್ನು ಹೇಗೆ ಲೆಕ್ಕಹಾಕಿದರೆಂದು ಯೋಚಿಸುವ ಗೋಜಿಗೇ ಹೋಗುವುದಿಲ್ಲ.
ಇಂದು ಬಿಡುವುಮಾಡಿಕೊಂಡು ಓದಿಬಿಡಿ!

ಮತ್ತೆ ವಿದ್ಯುತ್ ಬಿಲ್ಲಿಗೇ ಬರೋಣ! ಈ ವಿದ್ಯುತ್ ಬಿಲ್ಲನ್ನು ಕೂಲಂಕುಷವಾಗಿ ನೋಡಿದಾಗ 
ಉದಾಹರಣೆಗೆ:
“ಹಾಲಿ ಮಾಪನ(Present reading)” 3560
“ಹಿಂದಿನ ಮಾಪನ(Previous reading)” 3520
“ಬಳಸಿದ ಯುನಿಟ್’ಗಳು(Units consumed)” 40
ಎಂದಿರುತ್ತದೆ. 

ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಯುನಿಟ್’ಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿರುತ್ತಾರೆ. ಅದರ ಆಧಾರದ ಮೇಲೆ ತಿಂಗಳ ವಿದ್ಯುತ್ ಬಳಕೆಯ ಬಿಲ್ಲನ್ನು ಹೂಡಿ ನಮ್ಮ ಮೇಲೆ ಬಾಣ ಬಿಡುತ್ತಾರೆ!!

ಹಾಗಾದರೆ ‘ಯುನಿಟ್’ ಬಳಕೆ ಕಡಿಮೆ ಮಾಡಿದಷ್ಟು ನಮ್ಮ ಬಿಲ್ಲಿನ ಮೊತ್ತ ಕಡಿಮೆಯಾಗುತ್ತದೆಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ವಿದ್ಯುತ್ ಬಳಕೆ ಕಡಿಮೆಮಾಡಲು ಎಲ್ಲ ವಿದ್ಯುತ್ ಉಪಕರಣಗಳನ್ನು ನಂದಿಸಿ ಕುಳಿತರಾದೀತೆ? ನಂದಾದೀಪ ಬೆಳಗುತ್ತಿದ್ದರಲ್ಲವೇ ಬದುಕು ಸಾಗುವುದು.

ಇದಕ್ಕೆ ಉಪಾಯವೇನು ಎಂದು ಯೋಚಿಸುತ್ತಾ ಕುಳಿತಿರೇ? ಚಿಂತೆಬಿಡಿ! ಅದಕ್ಕೆ ಸರ್ವಶ್ರೇಷ್ಠವಾದ ಒಂದು ಉಪಾಯವಿದೆ, ಅದೇ ಕಡಿಮೆ ವಿದ್ಯುತ್ ಖರ್ಚುಮಾಡಿ ಹೆಚ್ಚು ಬೆಳಕು ತರುವ ದೀಪಗಳನ್ನು ಬಳಸುವುದು ಅಥವಾ ಕಡಿಮೆ ವಿದ್ಯುತ್ ಬಳಸಿ ಅಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸುವ ವಿದ್ಯುತ್ ಉಪಕರಣಗಳನ್ನು ಬಳಸುವುದು(ಟಿ.ವಿ., ಫ್ರಿಡ್ಜು, ವಾಶಿಂಗ್ ಮಷೀನು, ಇತ್ಯಾದಿ).

ಈಗ ಸಹಜವಾಗಿ ನಮ್ಮಲ್ಲಿ ಮೂಡುವ ಪ್ರಶ್ನೆ “ವಿದ್ಯುತ್ ಬಳಕೆಯನ್ನು ಹೇಗೆ ಅಳೆಯುತ್ತಾರೆ?” ಎಂದು:
ಇದಕ್ಕೆ ಉತ್ತರ ಹುಡುಕಲು ಪ್ರಯತ್ನಿಸೋಣ:
ಉದ್ದವನ್ನು ಅಂಗುಲ(Inch), ಅಡಿ(Foot), ಮೀಟರ್’ಗಳಲ್ಲಿಯೂ
ತೂಕವನ್ನು ಗ್ರಾಂ, Ounce ಗಳಲ್ಲಿಯೂ
ಉಷ್ಣತೆಯನ್ನು Celsius, fahrenheit ಗಳಲ್ಲಿಯೂ ಅಳೆಯುವುದು ನಮಗೆ ತಿಳಿದ ವಿಚಾರ.

ಹಾಗೆಯೆ ವಿದ್ಯುತ್ ಬಳಕೆಯನ್ನು ವ್ಯಾಟ್-ಅವರ್ kWh ಗಳಲ್ಲಿ(ವಿದ್ಯುತ್ ಪ್ರವಹಿಸುವಾಗ ೧ ಗಂಟೆಯಲ್ಲಿ ಎಷ್ಟು ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಎಂದು) ಅಳೆಯುತ್ತಾರೆ,
 ೧ ಕಿ.ವ್ಯಾ.ಅ. (ಕಿಲೊ ವ್ಯಾಟ್-ಅವರ್ kWh ) =  ೧ ಯುನಿಟ್.  
ಅಂದರೆ ೧೦೦೦ ವ್ಯಾಟ್-ಅವರ್’ಗಳು ೧  ಯುನಿಟ್’ಗೆ ಸಮ. ಇನ್ನೂ ಸುಲಭವಾಗಿ ಹೇಳಬೇಕಾದರೆ  ೧ ಕಿ.ವ್ಯಾ. ವಿದ್ಯುತ್ ಖರ್ಚಾದರೆ ವಿದ್ಯುತ್ ಮಾಪಕದಲ್ಲಿ ಒಂದು ಅಂಕೆ ಹೆಚ್ಚಾಗುತ್ತದೆ.  ೧ ವ್ಯಾಟ್ ಅಂದರೆ ಎಷ್ಟು ಎಂಬುದನ್ನು ಶಾಸ್ತ್ರೀಯವಾಗಿ ತಿಳಿಯುವ ಸಲುವಾಗಿ ತಲೆಕೆಡಿಸಿಕೊಳ್ಳುವುದು ಬೇಡ. ಅದರ ಬದಲು ದಿನನಿತ್ಯದ ಬಳಕೆಯಲ್ಲಿರುವ ಬಲ್ಬುಗಳನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ:

೪೦ ವ್ಯಾಟಿನ ವಿದ್ಯುತ್ ಬಲ್ಬೊಂದು ಒಂದು ಗಂಟೆ ಉರಿದಾಗ(240 ವೋಲ್ಟೇಜ್ ಇದ್ದಾಗ) ೪೦ ವ್ಯಾಟ್ ನಷ್ಟು ವಿದ್ಯುತ್ ಶಕ್ತಿಯನ್ನು ಖರ್ಚುಮಾಡುತ್ತದೆ. ಅಂದರೆ ೪೦ ವ್ಯಾಟಿನ ಬಲ್ಬನ್ನು ಸತತ ೨೫ ಗಂಟೆಗಳ ಕಾಲ ಉರಿಸಿದ್ದಲ್ಲಿ ೧ ಕಿ.ವ್ಯಾ. ಅಂದರೆ ಒಂದು ಯುನಿಟ್’ನಷ್ಟು ವಿದ್ಯುತ್ ಬಳಕೆಯಾಗಿರುತ್ತದೆ. ಹೀಗೆ ಪ್ರತಿ ವಿದ್ಯುತ್ ಉಪಕರಣವೂ ತನ್ನದೇ ಆದ ವಿದ್ಯುತ್ ವ್ಯಯಿಸುವ ಶಕ್ತಿಯನ್ನು(ಹರಹನ್ನು) ಹೊಂದಿರುತ್ತದೆ.

ವಿದ್ಯುತ್ ಉಪಕರಣಗಳ ಅಂದಾಜು ವಾರ್ಷಿಕ ವಿದ್ಯುತ್ ಬಳಕೆಯನ್ನು ಕೆಳಗಿನ ಪಟ್ಟಿಯಲ್ಲಿ ನೋಡೋಣ: 

ವಿದ್ಯುತ್ ಉಪಕರಣ
ಹರಹು(capacity) ವ್ಯಾಟ್’ಗಳಲ್ಲಿ
ಅಂದಾಜು ಬಳಕೆ ದಿನಗಳಲ್ಲಿ
ಒಟ್ಟು ವಾರ್ಷಿಕ ಬಳಕೆ ಯುನಿಟ್’ಗಳು
(ಕಿಲೊ ವ್ಯಾಟ್-ಅವರ್ kWh )
ಫ್ರಿಡ್ಜು (A+)
೧೫೦ ರಿಂದ ೨೦೦
೩೬೫ ದಿನ - ನಿರಂತರ
೧೦೦೦
ವಾಶಿಂಗ್ ಮಶಿನ್
೨೫೦೦ ರಿಂದ ೩೦೦೦
೪೮ ವಾರ x ೪ ಬಾರಿ ಪ್ರತಿ ವಾರಕ್ಕೆ (೧ kWh ಪ್ರತಿ ಬಾರಿ)
೧೯೨
LED ಟಿ.ವಿ.
೨೦ ರಿಂದ ೬೦
೩೬೫ ದಿನ(ದಿನಕ್ಕೆ ೪ ಗಂಟೆ)
೫೮
ಬಲ್ಬ್ x ೪
೪೦
೩೬೫ ದಿನ(ದಿನಕ್ಕೆ ೪ ಗಂಟೆ)
೨೩೩
LED ಬಲ್ಬ್ x ೪
೩೬೫ ದಿನ(ದಿನಕ್ಕೆ ೪ ಗಂಟೆ)
೪೧
ಮೊ. ಚಾರ್ಜರ್
೩೬೫ ದಿನ(ದಿನಕ್ಕೆ ೧ ಗಂಟೆ)
೧.೮
ಟಿ. ವಿ(ಹಳೆಯ ಮಾದರಿ)
೧೦೦ ರಿಂದ ೧೨೦
೩೬೫ ದಿನ(ದಿನಕ್ಕೆ ೪ ಗಂಟೆ)
೧೪೬


ಮೇಲಿನ ಪಟ್ಟಿಯಿಂದ ನಮಗೆ ತಿಳಿಯುವ ವಿಷಯ, ಹೆಚ್ಚು ವಿದ್ಯುತ್ ಉಳಿಸುವ (ಕಡಿಮೆ ವಿದ್ಯುತ್ ಬಳಸುವ) ಉಪಕರಣಗಳನ್ನು ಕೊಂಡಲ್ಲಿ ಕಡಿಮೆ ವಿದ್ಯುತ್ ಯುನಿಟ್’ಗಳು ಬಳಕೆಯಾಗಿ ಬಿಲ್ಲಿನ ಮೊತ್ತವೂ ಕಡಿಮೆಯಾಗುವುದೆಂದು. ಉದಾ: ಸಾಮಾನ್ಯ ಬಲ್ಬ್’ಗಳ ಬದಲು LED ಬಲ್ಬ್ ಗಳನ್ನು ಉಪಯೋಗಿಸುವುದರಿಂದ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು.

ಇನ್ನು ಮುಂದೆ ಯಾವುದೇ ವಿದ್ಯುತ್ ಉಪಕರಣವನ್ನು ಕೊಳ್ಳುವಾಗ, ಎಷ್ಟು ವಿದ್ಯುತ್ ಉಳಿಸುತ್ತದೆ ಎನ್ನುವ ಕಡೆಯೂ ಗಮನವಿರಲಿ. ಹೆಚ್ಚು ವಿದ್ಯುತ್ ಬಳಸುವ ಆದರೆ ಕಡಿಮೆ ಬೆಲೆಗೆ ಲಭ್ಯವಿರುವ ಉತ್ಪನ್ನಗಳಿಗೆ ಮಾರುಹೋಗಬೇಡಿ. 
ಈಗಲೇ ನಿಮ್ಮ ವಿದ್ಯುತ್ ಬಿಲ್ಲನ್ನು ಕೈಗೆತ್ತಿಕೊಳ್ಳಿ ಮತ್ತು ವಿದ್ಯುತ್ ಬಳಕೆ ಹಾಗು ಉಳಿಕೆಯ ಬಗ್ಗೆ ಮಾರ್ಗೋಪಾಯಗಳನ್ನು ಯೋಚಿಸಿ - ಉಳಿಸಿ - ನಮಗೂ ತಿಳಿಸಿ.

“ಹನಿಗೂಡಿದರೆ ಹಳ್ಳ” ಎಂಬಂತೆ “ವ್ಯಾಟ್ಗೂಡಿದರೆ ಯುನಿಟ್ಟು” ಎಂಬುದನ್ನು ಮರೆಯದಿರೋಣ. ವಿದ್ಯುತ್ ಉಳಿಸೋಣ - ಪರಿಸರ ಉಳಿಸೋಣ. ಹಾಗೇ ನಮ್ಮ ಇಂಧನ ಸಚಿವರಿಗೂ ವಿದ್ಯುತ್ ಖರೀದಿಸುವ ತಲೆಬಿಸಿ ಕಡಿಮೆ ಮಾಡೋಣ. ;)


ಅಂಗೈಯಲ್ಲಿನ ಆಕಾಶಕ್ಕೆ ಸೇರ್ಪಡೆಯಾದ ಈ ಹೊಸ ಮಿಂಚನ್ನು ಸ್ವಾಗತಿಸುತ್ತೇರೆಂದು ಭಾವಿಸಿದ್ದೇನೆ.

“ತಮಸೋಮಾ ಜ್ಯೋತಿರ್ಗಮಯ”
(ಕತ್ತಲಿನಿಂದ ಬೆಳಕಿನೆಡೆಗೆ)

ನಿಮ್ಮವ,
ನಾಗರಾಜ ಸಾಠೆ
ಹಾರಗದ್ದೆ