Saturday, March 23, 2013

ನಾವು ಏಕೆ ಆಕಳಿಸುತ್ತೇವೆ?

ಅಂಗೈಯಲ್ಲಿ ಆಕಾಶದ ಎರಡನೇ ನಕ್ಷತ್ರವಿಂದು ಬಾಯ್ದೆರೆದು ಆಕಳಿಸುತ್ತಿದೆ ನೋಡಬನ್ನಿ. 

ಹೀಗೆ ಮಾಡಿ ನೋಡಿ: 

ಮುಂದಿನ ಬಾರಿ ನೀವು ಒಂದು ಗುಂಪಿನ ನಡುವೆ ಇದ್ದಾಗ ಮನಸೋ-ಇಚ್ಛೆ ಆಕಳಿಸಿ ಬಿಡಿ. ನಂತರ ನಿಮ್ಮನ್ನು ಎಷ್ಟು ಜನ ಅನುಸರಿಸುತ್ತಾರೆಂದು ನೋಡಿ!?
ಮತ್ತೆ ನೀವು ಈ ಬರಹವನ್ನು ಓದಿ ಮುಗಿಸುವಷ್ಟರಲ್ಲಿ ಒಮ್ಮೆಯಾದರೂ ಆಕಳಿಸಿದ್ದಲ್ಲಿ ನನ್ನನ್ನು ನಿಂದಿಸಬೇಡಿ.

ಆಕಳಿಕೆ ಏಕೆ ಬರುತ್ತದೆ?

ಈ ಪ್ರಶ್ನೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೇಳಿದ್ದಲ್ಲಿ ಉತ್ತರ ಸಲೀಸಾಗಿ ಸಿಗುತ್ತದೆ: "ಆ ಮಾಸ್ತರು ತುಂಬಾ bore ಹೊಡೆಸುತ್ತಾರೆಂದು".  ಹಾಗಾದರೆ ಇದೊಂದೇ ಕಾರಣವೆ ಆಕಳಿಸಲು? ಇಲ್ಲ. 
ಸಾಮಾನ್ಯವಾಗಿ ನಮಗೆ ನಿದ್ದೆ ಬರುವಾಗ, ನಿದ್ದೆಯಿಂದ ಎದ್ದಾಗ, ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದಾಗ ಅಥವಾ ಯಾರಾದರು ಆಕಳಿಸುವುದನ್ನು ನೋಡಿದಾಗ ಆಕಳಿಸಬೇಕೆನಿಸುತ್ತದೆ(ಕೆಲವೊಮ್ಮೆ ಆಕಳಿಸುತ್ತಿರುವ ಭಾವಚಿತ್ರವನ್ನು ಅಥವಾ ದೃಶ್ಯವನ್ನು ನೋಡಿದಾಗಲೂ ಆಕಳಿಕೆ ಬರುವುದುಂಟು!). ಆಕಳಿಕೆ ಅಂಟು ಜಾಡ್ಯ ಹಾಗು ನಮ್ಮ ಹತೋಟಿಯಲ್ಲಿಲ್ಲದ್ದು ಎಂಬುದು ಎಲ್ಲರೂ ಒಪ್ಪುವಂಥ ಮಾತು. 
ಗರ್ಭದಲ್ಲಿರುವ ೧೧ ವಾರಗಳ ಭ್ರೂಣವೂ ಆಕಳಿಸುತ್ತದೆ ಎಂದು ಇತ್ತೀಚಿಗೆ ವಿಜ್ಞಾನಿಗಳು ವರದಿ ಮಾಡಿದ್ದಾರಂತೆ!.

ಆಕಳಿಕೆ ಬಗೆಗಿನ ಸಿದ್ಧಾಂತಗಳು:

 ಆಕಳಿಕೆ ಎಂಬುದು ಸರ್ವವ್ಯಾಪಿ ಹಾಗೂ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದರೂ, ಇದರ ಮೂಲ ಕಾರಣ ವಿಜ್ಞಾನಿಗಳಿಗೆ ಇನ್ನೂ ಎಟುಕದ ದ್ರಾಕ್ಷಿಯಾಗಿರುವುದು ಸೋಜಿಗವೇ ಸರಿ. ಇಷ್ಟಾಗಿಯೂ ಪ್ರಚಲಿತದಲ್ಲಿ ಆಕಳಿಕೆಯ ಕಾರಣದ ಬಗೆಗೆ ನಾನಾ ಸಿದ್ಧಾಂತಗಳಿವೆ. ಅವುಗಳಲ್ಲಿ ಮುಖ್ಯವಾದವು:
೧. ಶಾರೀರಿಕ ಸಿದ್ಧಾಂತ: 
ನಮ್ಮ ಶ್ವಾಸಕೋಶದಲ್ಲಿ(ಉಸಿರು ಪೆಟ್ಟಿಗೆಯಲ್ಲಿ!) ಇಂಗಾಲದ ಡೈ ಆಕ್ಸೈಡಿನ (CO2)  ಪ್ರಮಾಣ ಹೆಚ್ಚಾದಾಗ ಅಥವಾ ಹೆಚ್ಚು ಆಮ್ಲಜನಕ(O2) ಬೇಕೆನಿಸಿದಾಗ ನಾವು ಆಕಳಿಸುತ್ತೇವೆ. ದೊಡ್ಡ ಗುಂಪುಗಳಲ್ಲಿ ಅಥವಾ ಮುಚ್ಚಿದ ಕೋಣೆಗಳಲ್ಲಿದ್ದಾಗ ಹೆಚ್ಚು ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿದ್ದು ನಮ್ಮ ಉಸಿರು ಪೆಟ್ಟಿಗೆ ಸೇರುತ್ತದೆ. ಅದನ್ನು ಹೋಗಲಾಡಿಸಲು ನಾವು ಆಕಳಿಸುತ್ತೇವೆಂಬುದು ಸಮಂಜಸವೆನಿಸುತ್ತದೆ.
೨. ವಿಕಾಸವಾದ (Evolution Theory):
ಮಾಡುತ್ತಿರುವ  ಕೆಲಸವನ್ನು ಬದಲಾಯಿಸುವಂತೆ ಸೂಚಿಸಲು, ನಮ್ಮ ಪೂರ್ವಜರು ಆಕಳಿಸುತ್ತಿದ್ದರಂತೆ. ಇದೇ ಅಭ್ಯಾಸ ತಲೆಮಾರುಗಳಿಂದ ನಮಗೆ ಬಳುವಳಿಯಾಗಿ ಬಂದಿದೆಯೆನ್ನುವುದು ಇನ್ನೊಂದು ವಾದ.
೩. ಬೇಸರಿಕೆ:
ನಾವು ಮಾಡುತ್ತಿರುವ ಅಥವಾ ನೋಡುತ್ತಿರುವ ಕೆಲಸದಲ್ಲಿ ಉತ್ಸಾಹ ಇಲ್ಲದೇ ಇದ್ದಾಗ, ಬೇಸರಿಕೆಯಿಂದ ಆಕಳಿಕೆ ಉಂಟಾಗುತ್ತದೆಂದು ಪ್ರತಿಪಾದಿಸುತ್ತಾರೆ. ಹಾಗಿದ್ದಲ್ಲಿ, ಇನ್ನೇನು ಬಾಹ್ಯಾಕಾಶ ಯಾನ ಪ್ರಾರಂಭಿಸುತ್ತಿರುವ ಯಾನಿಗೂ, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಸ್ಪರ್ಧೆಯಾಳಿಗೂ ಆಕಳಿಕೆ ಬರುತ್ತದಲ್ಲವೇ? ಅದು ಹೇಗೆ?
೪. ಮಿದುಳಿನ ಉಷ್ಣತೆ ಸರಿದೂಗಲು:
ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಿದುಳಿನ ಉಷ್ಣತೆಯು ಸರಾಸರಿ ತಾಪಮಾನಕ್ಕಿಂತ ಹೆಚ್ಚಾದಾಗ, ಆಕಳಿಕೆ ಬಂದು ಮಿದುಳಿನ ಉಷ್ಣತೆ ಕಡಿಮೆಯಾಗಲು ಸಹಕರಿಸುವುದಂತೆ.

ಸಿದ್ಧಾಂತಗಳು ಒಂದೆಡೆಯಿರಲಿ,
ನಿಮಗಿದು ಗೊತ್ತೇ? ಬೆನ್ನು ಮೂಳೆಯಿರುವ ಎಲ್ಲಾ ಪ್ರಾಣಿಗಳೂ(ಮೀನಿನಿಂದ ಶುರುಮಾಡಿ ಆಕಳಿನ ವರೆಗೆ) ಆಕಳಿಸುತ್ತವೆಯೆಂದು!.

ಹಾಗೇ ಪುರಾಣಗಳ ವಿಚಾರಕ್ಕೆ ಬಂದರೆ ಮಹಾವಿಷ್ಣುವು ಮತ್ಸ್ಯಾವತಾರ ತಾಳುವುದಕ್ಕೂ ಆಕಳಿಕೆಯೇ ಕಾರಣ. ಚತುರ್ಮುಖ ಬ್ರಹ್ಮನು ಆಕಳಿಸಿದಾಗ ಹೊರಬಂದ ವೇದಗಳನ್ನು ಹಯಗ್ರೀವನೆಂಬ ದಾನವನು ಕದ್ದನಂತೆ!.

ಆ ಕಥೆ ಹಾಗಿರಲಿ,
ಆಕಳಿಕೆ ಬಗ್ಗೆ ಸ್ವಾರಸ್ಯಕರ ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ಇಲ್ಲಿ ಹಂಚಿಕೊಳ್ಳಿ.

ನಿಮ್ಮವ,
ನಾಗರಾಜ ಸಾಠೆ


ಸಾಹಿತ್ಯ,ಚಿತ್ರ ಕೃಪೆ: ಅಂತರ್ಜಾಲ