Sunday, January 6, 2013

ನಕ್ಷತ್ರ ೧: ವಿದ್ಯುತ್ ಮೋಟರುಗಳು ಹೇಗೆ ಕೆಲಸಮಾಡುತ್ತವೆ?

ಇಂದು ನಾವು ಮನೆ ಮನೆಗಳಲ್ಲಿ ಉಪಯೋಗಿಸುವ ವಿದ್ಯುತ್ ಬೀಸಣಿಗೆ(ಫ್ಯಾನ್)ಗಳಿಂದ ಹಿಡಿದು ಆಕಾಶದಲ್ಲಿ ಹಾರಾಡುವ ವಿಮಾನಗಳಲ್ಲಿಯೂ ಸ್ಥಾನ ಪಡೆದಿರುವ ವಿದ್ಯುತ್ ಮೋಟರುಗಳ ಕಾರ್ಯವೈಖರಿಯ ಮೂಲ ಸಿದ್ಧಾಂತದ ಮೇಲೆ,  "ಅಂಗೈ ಆಕಾಶ" ಮೊದಲ ನಕ್ಷತ್ರದ ಮೂಲಕ ಬೆಳಕು ಚೆಲ್ಲಲು ಯತ್ನಿಸುತ್ತಿದೆ. ಮೋಟರುಗಳ ಮೂಲ ಮಂತ್ರವನ್ನು ತಿಳಿಯುವ ಕುತೂಹಲವಿದ್ದಲ್ಲಿ ಮುಂದುವರೆಯಿರಿ.

ಅಯಸ್ಕಾಂತಗಳು(Magnets)

 ಚಿತ್ರ ೧. ಪಟ್ಟಿ ಅಯಸ್ಕಾಂತ ಮತ್ತು ಅದರ ಕಾಂತ ಕ್ಷೇತ್ರ.
ಎಲ್ಲಾ ವಿದ್ಯುತ್ (ನೇರ/ಪರ್ಯಾಯ (AC/DC) ) ಮೋಟರುಗಳು ಕಾಂತೀಯತೆಯ(magnetism) ಅಡಿಯಲ್ಲಿ ಕೆಲಸಮಾಡುತ್ತವೆ.
ನಾವು ನಮ್ಮ ಚಿಕ್ಕಂದಿನಲ್ಲಿ ಅಯಸ್ಕಾಂತಗಳೊಂದಿಗೆ ಆಡಿರುತ್ತೇವೆ ಮತ್ತು ಶಾಲೆಯ ಪಾಠಗಳಲ್ಲಿ ಅಯಸ್ಕಾಂತಗಳ ಬಗ್ಗೆ ಕಲಿತಿರುತ್ತೇವೆ. ಯಾವುದೇ ಅಯಸ್ಕಾಂತವು ಒಂದು ಉತ್ತರ ಹಾಗು ಒಂದು ದಕ್ಷಿಣ ಧ್ರುವವನ್ನು ಹೊಂದಿರುತ್ತದೆ. ಹಾಗೆಯೇ ಎರಡು ಪಟ್ಟಿಯಂತಹ ಅಯಸ್ಕಾಂತಗಳನ್ನು(Bar Magnets) ಹತ್ತಿರ ತಂದಲ್ಲಿ ಸಮಧ್ರುವ ಗಳು ದೂರತಳ್ಳಲ್ಪಡುತ್ತವೆ ಹಾಗು ವಿರುದ್ಧ ಧ್ರುವಗಳು ಹತ್ತಿರ ಸೆಳೆಯಲ್ಪಡುತ್ತವೆ ಎಂಬುದು ನಮಗೆ ತಿಳಿದ ವಿಚಾರವೇ ಸರಿ.
ಚಿತ್ರ ೨. ಮಧ್ಯದ ಅಯಸ್ಕಾಂತವು ಸಮ ಧ್ರುವಗಳಿಂದ ದೂರ ತಳ್ಳಲ್ಪಡುತ್ತಾ, ವಿರುದ್ಧ ಧ್ರುವಗಳು ಸೆಳೆಯಲ್ಪಡುತ್ತವೆ.

ಈಗ ಚಿತ್ರ ೨ರಲ್ಲಿ ತೋರಿಸಿರುವಂತೆ ಮೂರು ಅಯಸ್ಕಾಂತಗಳನ್ನು ತೆಗೆದುಕೊಂಡು; ಎಡ, ಬಲದ ಅಯಸ್ಕಾಂತಗಳನ್ನು ಸ್ಥಿರವಾಗಿ ನಿಲ್ಲಿಸಿ, ಮಧ್ಯದ ಅಯಸ್ಕಾಂತವು ತನ್ನ ಮಧ್ಯ ಬಿಂದುವಿನ ಸುತ್ತ ತಿರುಗಲು ಅವಕಾಶವಿರುವಂತೆ ಜೋಡಿಸಿದ್ದಲ್ಲಿ; ವಿರುದ್ಧ ಧ್ರುವಗಳ ಸೆಳೆತದಿಂದ ಮಧ್ಯದ ಅಯಸ್ಕಾಂತವು ತಿರುಗುತ್ತಾ ಚಿತ್ರ ೩ ರಲ್ಲಿ ತೋರಿಸಿರುವ ಸ್ಥಿತಿಗೆ ಬಂದು ನಿಲ್ಲುತ್ತದೆ.
ಚಿತ್ರ ೩. ಮಧ್ಯದಲ್ಲಿರುವ ಅಯಸ್ಕಾಂತದ ಧ್ರುವಗಳನ್ನು ಬದಲಿಸದೆ ಹೋದಲ್ಲಿ ಮೂರು ಅಯಸ್ಕಾಂತಗಳು ಇದೇ ಸ್ಥಿತಿಯಲ್ಲಿರುತ್ತವೆ.

ಈಗ ಮಧ್ಯ ಅಯಸ್ಕಾಂತದ ಧ್ರುವಗಳನ್ನು ಬದಲಿಸಿದರೆ(ಚಿತ್ರ ೨ ರಂತೆ) ಮೇಲೆ ತಿಳಿಸಿದ ಕ್ರಿಯೆಯು ಪುನರಾವರ್ತಿಸುತ್ತದೆ. ಹೀಗೆಯೇ ಮಾಡಿದಲ್ಲಿ ಮಧ್ಯದ ಅಯಸ್ಕಾಂತವು ಗಿರಗಿರನೆ ತಿರುಗಲಾರಂಭಿಸುತ್ತದೆ!!.

ಆದರೆ ಸ್ಥಿರ ಅಯಸ್ಕಾಂತಗಳ(permanent magnets) ಧ್ರುವಗಳನ್ನು ಬದಲಾಯಿಸಲಾಗುವುದಿಲ್ಲ. ಮೇಲೆ ತಿಳಿಸಿದ ತತ್ವವನ್ನು ಸಾಧಿಸಲು ವಿದ್ಯುದಯಸ್ಕಾಂತಗಳು ಸಹಾಯಕ್ಕೆ ಬರುತ್ತವೆ.

ವಿದ್ಯುದಯಸ್ಕಾಂತಗಳು(Electro-magnets)  
ಚಿತ್ರ ೪. ವಿದ್ಯುದಯಸ್ಕಾಂತ.

ಒಂದು ಕಬ್ಬಿಣದ ಪಟ್ಟಿಯೊಂದನ್ನು ತೆಗೆದುಕೊಂಡು ವಿದ್ಯುತ್ ವಾಹಕ ತಂತಿಯನ್ನು ಚಿತ್ರ ೪ ರಲ್ಲಿ ತೋರಿಸಿರುವಂತೆ ಸುತ್ತಿದರೆ ವಿದ್ಯುದಯಸ್ಕಾಂತವಾಗುತ್ತದೆ. ವಿದ್ಯುದಯಸ್ಕಾಂತವು ತನ್ನ ಮೂಲಕ ವಿದ್ಯುತ್ ಹರಿಯುತ್ತಿದ್ದಾಗ ಮಾತ್ರ ಕಾಂತೀಯ ಗುಣಗಳನ್ನು ಹೊಂದಿರುತ್ತದೆ ಹಾಗು ವಿದ್ಯುತ್ ಹರಿವು ನಿಂತ ಬಳಿಕ ತನ್ನ ಕಾಂತೀಯ ಗುಣಗಳನ್ನುಕಳೆದುಕೊಳ್ಳುತ್ತದೆ.
ಚಿತ್ರ ೫. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು.

ಚಿತ್ರ ೬. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು (ವಿರುದ್ಧ ದಿಕ್ಕು).


ವಿದ್ಯುತ್ ಹರಿವಿನ ದಿಕ್ಕಿಗನುಸಾರವಾಗಿ, ಚಿತ್ರ ೫ ಮತ್ತು ೬ರಲ್ಲಿ ತೋರಿಸಿರುವಂತೆ ವಿದ್ಯುದಯಸ್ಕಾಂತದ ಧ್ರುವಗಳು ಅದಲು-ಬದಲಾಗುತ್ತವೆ. ಹೀಗೆ ವಿದ್ಯುದಯಸ್ಕಾಂತದ ವಿದ್ಯುತ್ ಹರಿವಿನ ದಿಕ್ಕನ್ನು ಪ್ರತಿ ಬಾರಿ ಬದಲಿಸುತ್ತ ವಿದ್ಯುತ್ ಮೋಟರಿನ ಸಿದ್ಧಾಂತವನ್ನು ಸಾಧಿಸಲಾಗುತ್ತದೆ.


ಚಿತ್ರ ೭. ನೇರ ವಿದ್ಯುತ್ ಮೋಟರಿನ ವ್ಯವಸ್ಥೆ.

ಚಿತ್ರ ೭ ರಲ್ಲಿ ತೋರಿಸಿರುವಂತೆ ಎರಡು ಸ್ಥಿರ(stator) ಬ್ರಶ್(ಗುಂಜು :) )ಗಳು ಹಾಗು ಎರಡು ತಿರುಗಣೆಯ(rotor/commutator) ವ್ಯವಸ್ಥೆಯನ್ನು ಉಪಯೋಗಿಸಿ ಮಧ್ಯದ ಅಯಸ್ಕಾಂತ(ಹಾಗು ತಿರುಗಣೆ) ತಿರುಗಿದಾಗ ವಿದ್ಯುತ್ ಪ್ರವಾಹದ ದಿಕ್ಕು ಬದಲಾಗುತ್ತ ಅಯಸ್ಕಾಂತ ತಿರುಗಲಾರಂಭಿಸುತ್ತದೆ!!. ಇಷ್ಟು ಇಲೆಕ್ಟ್ರಿಕ್ ಮೋಟರಿನ ಮೂಲ ಸಿದ್ಧಾಂತ.

ಚಿತ್ರ ೮. ನೇರ ವಿದ್ಯುತ್ ಮೋಟರ್.

ಹಾ! ಇಷ್ಟೆಲ್ಲಾ ಕಲಿತು "ಇಲೆಕ್ಟ್ರಿಕ್ ಮೋಟರ್"ಗೊಂದು ಕನ್ನಡ ನಾಮಕರಣ ಮಾಡಬೇಡವೇ??
"ವಿದ್ಯುತ್ ಗಿರಗಿಟ್ಲೆ" 
 ಹೇಗಿದೆ?
ನಿಮಗೆ ಬೇರೆ ಹೆಸರುಗಳು ಹೊಳೆದಲ್ಲಿ ತಿಳಿಸಿ.

ಈ ಲೇಖನದ ಬಗ್ಗೆ ’ಕಾಮೆಂಟ್ಸ್’ಗಳ ಮೂಲಕ ಮುಕ್ತವಾಗಿ ಚರ್ಚಿಸಬಹುದು. ಅದರಿಂದ ನಮ್ಮೆಲ್ಲರ ಬುದ್ಧಿಗಿಷ್ಟು ಕಿಚ್ಚು ಹಚ್ಚಬಹುದು.
ಮತ್ತೆ ಇನ್ನೊಂದು ಲೇಖನದೊಂದಿಗೆ ಭೇಟಿಯಾಗೋಣ.

ಚಿತ್ರ ಹಾಗು ಸಿದ್ಧಾಂತ ಕೃಪೆ: ಅಂತರ್ಜಾಲ.